ಯಂಗ್, ಎಮಿಲಿ ಹಿಲ್ದಾ
1880 - 1949. ಇಂಗ್ಲಿಷ್ ಕಾದಂಬರಿಕಾರ್ತಿ. 1880ರಲ್ಲಿ ನಾರ್ದಂಬರ್‍ಲೆಂಡಿನಲ್ಲಿ ಹುಟ್ಟಿದಳು. ತಂದೆ ವಿಲಿಯಂ ಮೈಖೇಲ್, ತಾಯಿ ಫ್ರಾನ್ಸಿಸ್ ಜೇನ್, 1902ರಲ್ಲಿ ಬ್ರಿಸ್ಟಲ್‍ನ ವಕೀಲ ಜೆ.ಎ.ಎಚ್. ಡೇನಿಯಲ್ ಎಂಬವನನ್ನು ದಂಪತಿಗಳಿಬ್ಬರೂ ಸಮರಸೇವೆಯಲ್ಲಿದ್ದರು. ಈಕೆ ಕುದುರೆ ಲಾಯವೊಂದನ್ನು ನೋಡಿಕೊಳ್ಳುತ್ತಿದ್ದಳು. ಪತಿ ಡೇನಿಯಲ್ ಯುದ್ಧದಲ್ಲಿ ಮಡಿದ ಅನಂತರ 1918ರಲ್ಲಿ ಈಕೆ ಲಂಡನ್ನಿಗೆ ಬಂದು ನೆಲೆಸಿದಳು. ಆ ವೇಳೆಗೆ ಈಕೆಯ ಮೂರು ಕಾದಂಬರಿಗಳು ಪ್ರಕಟವಾಗಿದ್ದವು. ಹೆಸರನ್ನು ವಿಸ್ತರಿಸಿ ಬರೆಯದೆ ಇ. ಎಚ್. ಯಂಗ್ ಎಂದು ಕಾದಂಬರಿಗಳಲ್ಲಿ ಮುದ್ರಿಸಿದ್ದುದರಿಂದ ಓದುಗರೂ ಸಾಟರ್ಡೆ ರಿವ್ಯೂನ ಪುಸ್ತಕಾವಲೋಕನಕಾರರೂ ಯಂಗ್ ಪುರಷ ಎಂದೇ ಭಾವಿಸಿ ವಿಮರ್ಶೆಯಲ್ಲಿಯ ಉಲ್ಲೇಖಿಸಿದ್ದರು. ಅಮೆರಿಕಾದಲ್ಲೂ ಸಹ ಕಾದಂಬರಿಕಾರರು ಪುರುಷ ಪರ್ವತಾರೋಹಣದಲ್ಲಿ ವಿಶೇಷ ಆಸಕ್ತಿಯಿತ್ತು. ಬೇಸಗೆಯಲ್ಲಿ ವೇಲ್ಸ್‍ನಲ್ಲಿ ಅಥವಾ ಸ್ವಿಟ್ಜರ್‍ಲೆಂಡಿನಲ್ಲಿ ಪರ್ವತಾರೋಹಣದಲ್ಲಿ ತೊಡಗುತ್ತಿದ್ದಳು. ಸ್ವಿಟ್ಜರ್‍ಲೆಂಡಿನ ಪರ್ವತಾವಳಿಯಲ್ಲಿ ಒಮ್ಮೆ ಪರಿಚಿತ ಹಳೆಯ ಜಾಡನ್ನು ಬಿಟ್ಟು ಹೊಸ ಜಾಡನ್ನೇ ಕಂಡುಹಿಡಿದಳು.

 ವಿಲಿಯಮ್ (1925) ಈಕೆಯ ಮೊದಲ ಯಶಸ್ವಿ ಕಾದಂಬರಿ, ಇದರ ನಾಯಕ ಎಂತಹ ಸಂದರ್ಭದಲ್ಲೂ ಶಾಂತತೆಯನ್ನು ಕಳೆದುಕೊಳ್ಳದೆ ಸದಾ ಸಮಾಧಾನ ಚಿತ್ತದಿಂದಿರುವ ಹಿರಿಯ. ಕ್ಷೋಭೆ, ಉದ್ವೇಗಗಳಿಗೆ ಒಳಗಾಗದೆ ವಿಚಾರಮಾಡುವವ. ಆತನ ಮಗಳು ಮದುವೆ ಆಗಿಯೂ ಪ್ರೀತಿಸದ ಗಂಡನನ್ನು ತೊರೆದು ತನ್ನನ್ನು ಪ್ರೀತಿಸುವವನೊಬ್ಬನೊಂದಿಗೆ ಓಡಿಹೋದಾಗ ವಿಚಲಿತನಾಗದೆ ಆಕೆಯ ಧೈರ್ಯ, ದಿಟ್ಟನಿಲುವುಗಳನ್ನು ಸಮರ್ಥಿಸುತ್ತಾನೆ. ಮಿಸ್ ಮೋಲ್ (1930) ಕಾದಂಬರಿಯಲ್ಲಿ ಆಡಂಬರದ ಜೀವನ ನಡೆಸುತ್ತಿದ್ದ ಪಾದ್ರಿಯೊಬ್ಬನ ಮನೆಯಲ್ಲಿ ಇದ್ದ ಮನೆಗೆಲಸದವನ ಸಂಕಷ್ಟಗಳ ಕತೆ ನಿರೂಪಿತವಾಗಿದೆ. ಇದಕ್ಕೆ ಜೇಮ್ಸ್ ಟೇಯ್ಟ್‍ಬ್ಲ್ಯಾಕ್ ಸ್ಮಾರಕ ಬಹುಮಾನ ಬಂತು. ಓದುಗರ ಬೇಡಿಕೆಯ ಮೇರೆಗೆ ಇದು 1941ರಲ್ಲಿ ಅಮೆರಿಕದಲ್ಲಿ ಪುನರ್‍ಮುದ್ರಣಗೊಂಡಿತು. ಎ ಕಾನ್ ಆಫ್ ವೀಟ್ (1910), ಯಾಂಡರ್ (1912), ಮೂರ್ ಫೈರ್ಸ್ (1916), ದ ಬ್ರಿಜ್ ಡಿವೈಡಿಂಗ್ (1932), ದ ವಿಕಾರ್ಸ್ ಡಾಟರ್ (1928), ಜೆನ್ನಿರೆನ್ (1932), ದ ಕ್ಯುರೇಟ್ಸ್ ವೈಫ್ (1934), ಸಿ ಲಿಯಾ (1938), ಕಾರವಾನ್ ಐಲೆಂಡ್ (1940), ರಿವರ್ ಹಾಲಿಡೆ (1942), ಚಾಟರ್‍ಟನ್ ಸ್ಕೇರ್ (1947) - ಇವು ಈಕೆಯ ಇತರ ಕೃತಿಗಳು.

ಗೃಹಿಣಿಯ ದೈನಂದಿನ ಜೀವನದ ತಾಪತ್ರಯಗಳು, ಕೌಟುಂಬಿಕ ಸಮಸ್ಯೆಗಳು ಈಕೆಯ ಕಾದಂಬರಿಗಳ ಕಥಾವಸ್ತು. ಕಾದಂಬರಿಗಾರ್ತಿಗೆ ಪ್ರಸಿದ್ಧ ವ್ಯಕ್ತಿಗಳು, ಪ್ರತಿಭಾವಂತ ಜನರಿಗಿಂತ ಉಪನಗರವೊಂದರ ನಿವಾಸಿ - ಸಾಧಾರಣ ಮಹಿಳೆಯ ಬಗ್ಗೆ ಆಸಕ್ತಿ, ಮುಖ್ಯ ಸಾಮಾಜಿಕ ಘಟನೆಗಳಿಗಿಂತ, ಮಹತ್ತರ ರಾಜಕೀಯ ತೀರ್ಮಾನಗಳಿಗಿಂತ, ಸಾಧಾರಣ ಸಂಗತಿಗಳ ಬಗ್ಗೆ ಮಾತ್ರ ಆಸ್ಥೆ. ಸಮಸ್ಯಾತ್ಮಕ ವಸ್ತುಗಳಿಗಿಂತ ಶಾಂತವಾದ ದೈನಂದಿನ ಬದುಕಿನಲ್ಲೇ ಏಳುವ ಕ್ಷುದ್ರವೆನ್ನಬಹುದಾದ ಆದರೂ ಬಿರುಗಾಳಿ ಎಬ್ಬಿಸುವ ಘಟನೆಗಳ ಚಿತ್ರಣ ಈಕೆಯ ಕಾದಂಬರಿಗಳ ಮೂಲ ದ್ರವ್ಯ. ಒಟ್ಟಿನಲ್ಲಿ ಈಕೆ ಮಧ್ಯವರ್ಗದ ಕೌಟುಂಬಿಕ ಜೀವನ ಕತೆಗಳನ್ನೇ ಆರಿಸಲು ಬಯಸುವ ಜೇನ್ ಆಸ್ಟಿನ್ ಪರಂಪರೆಯ ಕಾದಂಬರಿಕಾರ್ತಿ ಎನ್ನಬಹುದು. 
	 (ಕೆ.ಬಿ.ಪಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ